ಡೀಸೆóಲ್, ರುಡಾಲ್ಫ್
	(1858-1913). ಡೀಸೆಲ್ ಎಂಜಿನ್ ಎಂದು ಪ್ರಸಿದ್ಧವಾಗಿರುವ ಅಂತರ್ದಹನ ಯಂತ್ರದ ತತ್ತ್ವವನ್ನು ಆವಿಷ್ಕರಿಸಿ ಪ್ರತ್ಯಕ್ಷವಾಗಿ ಅದನ್ನು ನಿರ್ಮಿಸಿದ ಜರ್ಮನಿಯ ಉಪe್ಞÁಕಾರ. ದಾತ. ಈ ಎಂಜಿನ್ನಿಗೆ ತುಂಬುವ ಇಂಧನಕ್ಕೆ ಡೀಸೆಲ್ ಎಣ್ಣೆಯೆಂದೇ ಹೆಸರು.

	ಫ್ರಾನ್ಸಿನ ಪ್ಯಾರಿಸಿನಲ್ಲಿ ಜನಿಸಿದ (18-3-1858) ರುಡಾಲ್ಫನ ವಿದ್ಯಾಭ್ಯಾಸ ಫ್ರಾನ್ಸಿನಲ್ಲೂ ಜರ್ಮನಿಯಲ್ಲೂ ನಡೆಯಿತು. ಎಂಜಿನಿಯರಿಂಗ್ ವಿದ್ಯಾರ್ಥಿ ಆಗಿದ್ದ ಡೀಸೆಲ್ಲನ ಸಂಶೋಧಕ ಮನಸ್ಸಿಗೆ ಸವಾಲಾದದ್ದು ಅಂದಿನ ಪರಿಪೂರ್ಣ ಉಗಿ ಎಂಜಿನ್ನಿನಲ್ಲಿ ಉಪಯೋಗಕ್ಕೆ ದೊರೆಯದೆ ಪೋಲಾಗುತ್ತಿದ್ದ ಸಾಮಥ್ರ್ಯವನ್ನು ಉಳಿಸುವುದು ಹೇಗೆಂಬ ಪ್ರಶ್ನೆ ಹಾಗೂ ಅದನ್ನು ಉಪಯುಕ್ತ ಕಾರ್ಯವನ್ನಾಗಿ ಪರಿವರ್ತಿಸುವುದು ಹೇಗೆ ಎಂಬ ಪ್ರಶ್ನೆ. ಈ ದಿಶೆಯಲ್ಲಿ ಈತ ನಾಲ್ಕು ವರ್ಷಗಳ ಕಾಲ ಸತತ ಪ್ರಯೋಗಗಳನ್ನು ಮಾಡಿದ. ಬರ್ಫವನ್ನು ತಯಾರಿಸುವ ಕಾರ್ಖಾನೆಯಲ್ಲಿ ಸಂಕೋಚಕವೊಂದರ ಉಷ್ಣತೆ ಏರುವುದನ್ನು ಡೀಸೆಲ್ ಗಮನಿಸಿದ. ಅಲ್ಲಿಗೆ ಸಂಕೋಚಕವೊಂದರಿಂದ ಉತ್ಪಾದಿಸಿದ ಉಷ್ಣದಿಂದ ಎಂಜಿನ್ನಿನ ಇಂಧನವನ್ನು ಉರಿಸಬಹುದು (ಅಂದರೆ ವಿದ್ಯುತ್ತಿನ ಕಿಡಿ ಬೇಕಾಗಿಲ್ಲ) ಎಂದು ಈತನಿಗೆ ಹೊಳೆಯಿತು. ತಾತ್ತ್ವಿಕವಾಗಿ ಇದು ಸರಿ ಎಂದು ತೋರಿದರೂ ಪ್ರಾಯೋಗಿಕವಾಗಿ ಇಂಥ ಒಂದು ಎಂಜಿನ್ ಕೆಲಸ ಮಾಡದು ಎಂಬುದಾಗಿ ಅವನ ಸ್ನೇಹಿತರೂ ಸಹೋದ್ಯೋಗಿಗಳೂ ಖಚಿತವಾದ ಅಭಿಪ್ರಾಯ ನೀಡಿ ಡೀಸೆಲನ ಉತ್ಸಾಹಭಂಗ ಮಾಡಿದರು. ಡೀಸೆಲ್ ಮಾತ್ರ ಧೈರ್ಯಗೆಡದೆ ತನ್ನ ಪ್ರಯೋಗದಲ್ಲಿ ತೊಡಗಿದ. ತಾನು ರಚಿಸಿದ ಎಂಜಿನ್ನಿನಲ್ಲಿ ಮೊದಲನೆಯ ಬಾರಿಗೆ ಕಲ್ಲಿದ್ದಲಿನ ಪುಡಿಯನ್ನು ಉಪಯೋಗಿಸಿ ಪ್ರಯೋಗ ನಡೆಸಿದ. ಕೆಲಸಮಾಡುವಾಗ ಅದು ಸ್ಫೋಟಗೊಂಡಿತು. ವಿದ್ಯುತ್ ಕಿಡಿ ಇಲ್ಲದೆ ಸ್ಫೋಟಗೊಳಿಸಬಹುದೆಂದು ಈ ಪ್ರಯೋಗದಿಂದ ಸ್ಥಿರವಾಯಿತು. ಮುಂದೆ ಡೀಸೆಲನು ಕೈಗಾರಿಕೋದ್ಯಮಿ ಫ್ರೆಡ್ರಿಕ್ಸ್ ಕ್ರುಪ್‍ನ ಸಹಾಯದಿಂದ ಕಲ್ಲಿದ್ದಲಿನ ಪುಡಿ ತೈಲವನ್ನು ಮತ್ತು ಪ್ರಬಲ ಲೋಹಗಳನ್ನು ಬಳಸಿ ಎಂಜಿನನ್ನು ರಚಿಸಿದ. ಕಲ್ಲಿದ್ದಲಿನ ಪುಡಿಯ ತೈಲವನ್ನು ಉಪಯೋಗಿಸಿದ. ಆಗ್ಸ್‍ಬುರ್ಗ್‍ನಲ್ಲಿ 1897ರಲ್ಲಿ ಉತ್ತಮಗೊಳಿಸಿದ ಮೊದಲನೆಯ ಡೀಸೆಲ್ ಎಂಜಿನ್ನು ಸಿದ್ಧವಾಯಿತು. 1920ರ ಕೊನೆಗೆ ಈ ಎಂಜಿನ್ನು ಬಸ್ಸು, ಟ್ರಕ್ಕುಗಳಲ್ಲಿ ಉಪಯೋಗವಾಗಲು ಪ್ರಾರಂಭವಾಯಿತು. ಇದಕ್ಕೆ ಭಾರವಾದ ತೈಲವನ್ನು ಇಂಧನವಾಗಿ ಬಳಸಬೇಕು. ಪೆಟ್ರೋಲ್ ಎಂಜಿನ್ನುಗಳಿಗೆ ಬೇಕಾದ ವಿದ್ಯುತ್ ಕಿಡಿಯ ಸಲಕರಣೆ ಬೇಕಿಲ್ಲ. ಪೆಟ್ರಲ್ ಎಂಜಿನ್ನಿಗಿಂತ ಈ ಎಂಜಿನ್ ಅಗ್ಗ.

	ಬ್ರಿಟಿಷ್ ನೌಕಾ ಆಡಳಿತ ಡೀಸೆಲ್‍ನನ್ನು ತಾಂತ್ರಿಕ ವಿಚಾರ ವಿನಿಮಯಕ್ಕಾಗಿ ಇಂಗ್ಲೆಂಡಿಗೆ ಆಹ್ವಾನಿಸಿತು (1913). ಈ ಯಾನದ ವೇಳೆ ಇಂಗ್ಲಿಷ್ ಕಡಲ್ಗಾಲುವೆಯನ್ನು ಹಡಗು ದಾಟುತ್ತಿದಾಗ ಅದರಿಂದ ಕಾಲು ಜಾರಿ ನೀರಿಗೆ ಬಿದ್ದು ಡೀಸೆಲ್ ಅಪಮೃತ್ಯುವನ್ನು ಅಪ್ಪಿದ (30-9-1913).
                                                                              (ಎಚ್.ಎಸ್.ಆರ್)
(ಪರಿಷ್ಕರಣೆ: ಹೆಚ್.ಆರ್.ಆರ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ